ರಾಮನಾಥಪುರ
ಭಾರತದ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಹಾಗೂ ಹಾಸನಜಿಲ್ಲಾ ಉಪವಿಭಾಗಕ್ಕೆ ಸೇರಿದ ಅರಕಲಗೂಡು ತಾಲ್ಲೂಕಿನ ಒಂದು ಗ್ರಾಮ ಹಾಗೂ ಹೋಬಳಿ ಆಡಳಿತ ಕೇಂದ್ರ. ಅರಕಲಗೂಡಿಗೆ ದಕ್ಷಿಣದಲ್ಲಿ 10 ಕಿ.ಮೀ. ದೂರದಲ್ಲಿ ಕಾವೇರಿನದಿ ಎಡದಂಡೆಯ ಮೇಲಿರುವ ಒಂದು ಪುಣ್ಯಕ್ಷೇತ್ರ.

ಇಲ್ಲಿ ಸುಬ್ರಮಣ್ಯೇಶ್ವರ, ಪಟ್ಟಾಭಿರಾಮ, ಅಗಸ್ತ್ಯೇಶ್ವರ, ಪ್ರಸನ್ನರಾಮೇಶ್ವರ, ಆಂಜನೇಯ, ಲಕ್ಷ್ಮೀನರಸಿಂಹ ಮತ್ತು ದುರ್ಗಾರಾಮೇಶ್ವರಿ ಎಂಬ ಸಪ್ತ ದೇಗುಲಗಳಿವೆ. ಇದಲ್ಲದೇ ವಹ್ನಿಪುಷ್ಕರಿಣಿ. ಗೋಗರ್ಭ, ಊರ್ವಶಿಶಿಲೆ ಇವು ನೋಡಬೇಕಾದವು. ಹರಿಹರಭೇದವಿಲ್ಲದ ಈ ಸ್ಥಳಕ್ಕೆ ಆದಿಶಂಕರ, ರಾಮಾನುಜ, ಶ್ರೀವ್ಯಾಸತೀರ್ಥರು ಬಂದಿದ್ದರು ಎಂದು ಹೇಳಲಾಗಿದೆ. ರಾಮನಾಥಪುರ ದಕ್ಷಿಣ ಕಾಶಿ ಎಂದು ಹೆಸರು ಗಳಿಸಿದೆ.

ದ್ರಾವಿಡ ಶೈಲಿಯ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಏಳು ಹೆಡೆಗಳುಳ್ಳ ಸುಂದರ ನಾಗವಿಗ್ರಹವಿದೆ. ಷಷ್ಠಿಯಂದು ರಥೋತ್ಸವ ಜಾತ್ರೆ ಜರುಗುತ್ತದೆ. ಆಗ ವಸ್ತುಪ್ರದರ್ಶನ ಮತ್ತು ದನಗಳ ಜಾತ್ರೆ ನಡೆಯುತ್ತದೆ. ಪಟ್ಟಾಭಿರಾಮಚಂದ್ರ ದೇವಾಲಯ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ. ಶ್ರೀರಾಮಚಂದ್ರ ಕುಳಿತಿದ್ದು ಆತನ ತೊಡೆಯ ಮೇಲೆ ಸೀತೆ ಕುಳಿತಿರುವುದು ಇಲ್ಲಿಯ ವೈಶಿಷ್ಟ್ಯ. ಇಲ್ಲಿಯ ಮೂಲ ವಿಗ್ರಹವನ್ನು ಸೌಭರಿ ಮುನಿಗಳು ಸ್ಥಾಪಿಸಿದರೆಂದು ಹೇಳಲಾಗಿದೆ. ಪ್ರತಿವರ್ಷ ವೈಶಾಖ ಶುಕ್ಲದಲ್ಲಿ ಇಲ್ಲಿ ರಥೋತ್ಸವ ನಡೆಯುವುದು.

ವಿಜಯನಗರದ ಅರಸುಗಳ ಮತ್ತು ಪಾಳೆಯಗಾರರ ಕಾಲದಲ್ಲಿ ವಿಸ್ತರಿಸಲ್ಪಟ್ಟ ಪ್ರಸನ್ನ ರಾಮೇಶ್ವರ ದೇವಾಲಯ ಹೊಯ್ಸಳರ ಕಾಲದ್ದು. ಈ ದೇವರು ನಾಲ್ಕು ಯುಗಗಳಲ್ಲೂ ಒಂದೊಂದು ಹೆಸರಿನಿಂದ ವಿರಾಜಿಸಿದ್ದು ಪುರಾಣಗಳಿಂದ ತಿಳಿದು ಬರುತ್ತದೆ. ಕೃತಯುಗದಲ್ಲಿ ಸಂವರ್ತಿಕೇಶ್ವರ, ದ್ವಾಪರದಲ್ಲಿ ವಹ್ನಿಕೇಶ್ವರ, ತ್ರೇತಾಯುಗದಲ್ಲಿ ವಾಸುಕೇಶ್ವರ, ಕಲಿಯುಗದಲ್ಲಿ ರಾಮೇಶ್ವರನೆಂದು ಪ್ರಸಿದ್ಧಿ ಪಡೆದಿದೆ. ಶ್ರೀರಾಮ ಸ್ಥಾಪಿಸಿ ಪೂಜಿಸಿದ್ದರಿಂದ ರಾಮೇಶ್ವರ ಎಂಬ ಹೆಸರೂ ಊರಿಗೆ ರಾಮನಾಥಪುರ ಎಂಬ ಹೆಸರೂ ಬಂತೆಂದು ಹೇಳಲಾಗಿದೆ. ಪಟ್ಟಾಭಿ ರಾಮಚಂದ್ರ ದೇವಾಲಯದ ಎದುರಿಗೆ ಲಕ್ಷ್ಮೀನರಸಿಂಹ ದೇವಾಲಯವಿದೆ. ಇದು ಚಿಕ್ಕದೇವರಾಜ ಒಡೆಯರವರಿಂದ ನಿರ್ಮಿತವಾದದ್ದು. ದುರ್ಗಾರಾಮೇಶ್ವರಿ ದೇವಾಲಯದ ದೇವವಿಗ್ರಹವನ್ನು ಶಂಕರಾಚಾರ್ಯರು ಸ್ಥಾಪಿಸಿದರೆಂದು ಪ್ರತೀತಿ. ಅಗಸ್ತ್ಯ ಮುನಿಗಳಿಂದ ಸ್ಥಾಪಿಸಲ್ಪಟ್ಟ ಅಗಸ್ತೇಶ್ವರ ದೇವಾಲಯ ಇನ್ನೊಂದು ರಮಣೀಯ ದೇವಾಲಯ. ಮಾರ್ಗಶಿರ ಶುದ್ಧ ಷಷ್ಠಿಯಂದು ಇಲ್ಲಿ ದನಗಳ ಜಾತ್ರೆ ನಡೆಯುವುದು. ಈ ಊರಿನ ಬಳಿ ಕಾವೇರಿ ನದಿಗೆ ಒಂದು ಸೇತುವೆಯನ್ನೂ ಕೃಷ್ಣರಾಜಕಟ್ಟೆ ಎಂಬ ಅಣೆಕಟ್ಟೆಯನ್ನೂ ಕಟ್ಟಲಾಗಿದೆ.

ಅಸುರರ ಗುರು ಶುಕ್ರಾಚಾರ್ಯರು ಸಂಜೀವಿನಿ ಮಂತ್ರದ ಸಿದ್ಧಿಗಾಗಿ ಇಲ್ಲಿ ತಪಸ್ಸನ್ನು ಮಾಡಿದ್ದರೆಂದೂ ಭೃಗು ಮುನಿಗಳಿಂದ ಶಾಪಗ್ರಸ್ತವಾದ ಅಗ್ನಿಗೆ ಇಲ್ಲಿ ಶಾಪವಿಮೋಚನೆ ಆಯಿತೆಂದೂ ಅದರ ನೆನಪಿಗಾಗಿ ಇಂದು ವಹ್ನಿಪುಷ್ಕರಿಣಿ ಇದೆ ಎಂದೂ ತ್ರೇತಾಯುಗದಲ್ಲಿ ರಾಮಚಂದ್ರ ಬ್ರಹ್ಮಹತ್ಯಾದೋಷ ಪರಿಹಾರಕ್ಕಾಗಿ ಇಲ್ಲಿ ಶಿವನನ್ನು ಪೂಜಿಸಿದನೆಂದೂ ಸ್ಥಳಪುರಾಣವಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ